ಶಿವಮೊಗ್ಗ ಭಾಗದಲ್ಲಿ ಭಾರಿ ಗಾಳಿ & ಮಳೆಯಿಂದ ಬೆಳೆ ಹಾನಿ – ರೈತರಿಗೆ ಪರಿಹಾರ ಘೋಷಣೆ

ಶಿವಮೊಗ್ಗ ಜಿಲ್ಲೆಯಲ್ಲಿ ಏಪ್ರಿಲ್ 26 ರಿಂದ ಏಪ್ರಿಲ್ 28, 2026ರ ಅವಧಿಯಲ್ಲಿ ಸುರಿದ ಭಾರಿ ಬಿರುಗಾಳಿ ಮತ್ತು ಮಳೆಯಿಂದಾಗಿ ವ್ಯಾಪಕ ಬೆಳೆ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಮುಖ್ಯವಾಗಿ ಭದ್ರಾವತಿ ಮತ್ತು ಶಿವಮೊಗ್ಗ ತಾಲೂಕುಗಳಲ್ಲಿ ಹೆಚ್ಚಿನ ಹಾನಿ ವರದಿಯಾಗಿದೆ.
ಬಿರುಗಾಳಿ ಮತ್ತು ಮಳೆಯಿಂದ ಹಾನಿಗೊಳಗಾದ ಅಡಿಕೆ, ತೆಂಗು ತೋಟ ಸೇರಿದಂತೆ ಬೆಳೆ ಹಾನಿಯಾದ ರೈತರಿಗೆ ಮತ್ತು ಮನೆ ಕಳೆದುಕೊಂಡವರಿಗೆ ತಕ್ಷಣವೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಬೆಳಿಗ್ಗೆ ಗಾಳಿ-ಮಳೆ ಹಾನಿಗೊಳಗಾದ ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಅರಹತೊಳಲು ಗ್ರಾಮದ ತೋಟಕ್ಕೆ ಭೇಟಿ ನೀಡಿ, ಬಿರುಗಾಳಿ ಮತ್ತು ಮಳೆಯಿಂದಾಗಿ ಧರೆಗುರುಳಿದ ಮರಗಳನ್ನು ವೀಕ್ಷಿಸಿ, ಸಂತ್ರಸ್ತ ರೈತರೊಂದಿ ಅವರು ಮಾತನಾಡಿದರು.
ಬಿರುಗಾಳಿಗೆ ಧರೆಗುರುಳಿದ ಅಡಿಕೆ ಮರಗಳು, ಹಾನಿಗೊಳಗಾದ ಮನೆಗಳು ವೀಕ್ಷಿಸಿದರು. ಸಂತ್ರಸ್ತ ರೈತರು ಮತ್ತು ಸಾರ್ವಜನಿಕರೊಂದಿಗೆ ಮಾತನಾಡಿ ಅಹವಾಲು ಸ್ವೀಕರಿಸಿದರು.
ನಂತರ ಅರಹತೊಳಲು ವಡ್ಡರಹಟ್ಟಿಗೆ ತೆರಳಿ ಬಿರುಗಾಳಿಗೆ ಹಾನಿಗೊಳಗಾದ ಮನೆಗಳು, ಕೊಟ್ಟಿಗೆಗಳನ್ನು ವೀಕ್ಷಿಸಿ, ಮನೆಯವರೊಂದಿಗೆ ಮಾತನಾಡಿ, ಅಧಿಕಾರಿಗಳ ಬಳಿ ನಷ್ಟದ ಕುರಿತು ಮಾಹಿತಿ ಪಡೆದುಕೊಂಡು, ತ್ವರಿತ ಪರಿಹಾರಕ್ಕೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.
ನಷ್ಟದ ಕುರಿತು ಸಮಗ್ರ ವರದಿ ನೀಡುವಂತೆ ಕಂದಾಯ ಇಲಾಖೆ, ಗ್ರಾ.ಪಂ. ವಿಪತ್ತು ನಿರ್ವಹಣೆ ಇಲಾಖೆ ಸೇರಿದಂತೆ ಸಮನ್ವಯ ಸಾಧಿಸಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾನು ಖುದ್ದಾಗಿ ಹಾನಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.
ವಡ್ಡರಹಟ್ಟಿ ಭಾಗದ ಹಲವು ಮನೆಗಳಿಗೆ ಇದುವರೆಗೆ ಗ್ರಾ.ಪಂ. ಯಿಂದ ಹಕ್ಕುಪತ್ರ ಲಭ್ಯವಾಗಿಲ್ಲ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದ್ದು ಈ ಕುರಿತು ಅಧಿಕಾರಿಗಳಿಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಮಳೆಯಿಂದ ಮನೆ ಕಳೆದುಕೊಂಡವರಿಗೆ ಮತ್ತು ಬೆಳೆ ಹಾನಿಯಾದ ರೈತರಿಂದ ಮಾಹಿತಿ ಪಡೆದು ವರದಿ ತಯಾರಿಸಿ, ತಕ್ಷಣವೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಯಾವುದೇ ವಿಳಂಬವಿಲ್ಲದೆ ವೈಜ್ಞಾನಿಕವಾಗಿ ಹಾನಿ ಸಮೀಕ್ಷೆ ನಡೆಸಲು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು .

ಬೆಳೆ ಹಾನಿಯ ಪ್ರಮುಖ ವಿವರಗಳು:
- ಅಡಿಕೆ ಮತ್ತು ತೆಂಗು: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು, ಆನವೇರಿ, ಮತ್ತು ಕಲ್ಲಿಹಾಳ ಹೋಬಳಿಗಳಲ್ಲಿ ಭಾರಿ ಗಾಳಿಗೆ ಅಡಿಕೆ ಮತ್ತು ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ರೈತರು ಪ್ರತಿ ಎಕರೆಗೆ ಸುಮಾರು 2 ರಿಂದ 3 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
- ಆರ್ಥಿಕ ನಷ್ಟ: ಒಂದು ಅಂದಾಜಿನ ಪ್ರಕಾರ, ಪ್ರತಿ ಎಕರೆಗೆ ಅಂದಾಜು 2 ರಿಂದ 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.
- ಬಾಳೆ ಬೆಳೆ: ಬಿರುಗಾಳಿಯ ತೀವ್ರತೆಗೆ ಹಲವೆಡೆ ಬಾಳೆ ಬೆಳೆ ಕೂಡ ನೆಲಕಚ್ಚಿದೆ.
ಪರಿಶೀಲನೆ ಮತ್ತು ಪರಿಹಾರ :
- ಸರ್ಕಾರದ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಭದ್ರಾವತಿ ತಾಲೂಕಿನ ಅರಹತೂಳಲು, ವಡ್ಡರಹಟ್ಟಿ ಮತ್ತು ಮಲ್ಲಿಗೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ.
- ಜಂಟಿ ಸಮೀಕ್ಷೆ: ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ, ವೈಜ್ಞಾನಿಕವಾಗಿ ಪರಿಹಾರದ ಮೊತ್ತವನ್ನು ನಿಗದಿಪಡಿಸುವಂತೆ ಸಚಿವರು ಸೂಚಿಸಿದ್ದಾರೆ.
- ವಿಪಕ್ಷಗಳ ಒತ್ತಾಯ: ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ಬಿಜೆಪಿ ನಿಯೋಗವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಂತ್ರಸ್ತ ರೈತರಿಗೆ ಕೂಡಲೇ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದೆ
ಪರಿಹಾರದ ಭರವಸೆ: ಸಂತ್ರಸ್ತ ರೈತರಿಗೆ ಮತ್ತು ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಬಿ.ವೈ. ರಾಘವೇಂದ್ರ ನೇತೃತ್ವದ ಬಿಜೆಪಿ ನಿಯೋಗವೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರಕ್ಕೆ ಒತ್ತಾಯಿಸಿದೆ.

