ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಕಲಾ ವೈಖರಿ

ಬೆಂಗಳೂರು: ಜನಸಾಮಾನ್ಯರಲ್ಲಿ ವರ್ಣಚಿತ್ರಗಳ ಬಗ್ಗೆ ಅಭಿರುಚಿ ಮೂಡಿಸಲು ಕರ್ನಾಟಕ ಲಲಿತಕಲಾ ಅಕಾಡೆಮಿಯು ನಗರದ ಆಯ್ದ ಮೆಟ್ರೊ ನಿಲ್ದಾಣಗಳಲ್ಲಿ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮುಂದಾಗಿದೆ

ಈ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್‌) ಜತೆಗೆ ಅಕಾಡೆಮಿ ಮಾತುಕತೆ ನಡೆಸುತ್ತಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತು, ವೆಂಕಟಪ್ಪ ಆರ್ಟ್ ಗ್ಯಾಲರಿ ಸೇರಿ ನಗರದ ಕೆಲವೆಡೆ ಮಾತ್ರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದ್ದು, ಆ ಸ್ಥಳಗಳಿಗೆ ಕಲಾವಿದರು ಹಾಗೂ ಕಲಾ ಪ್ರೇಮಿಗಳು ಮಾತ್ರ ಭೇಟಿ ನೀಡುತ್ತಿದ್ದಾರೆ. ಹೀಗಾಗಿ, ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಡೆ ಕಲಾಕೃತಿಗಳನ್ನು ಕೊಂಡೊಯ್ಯಲು ನಿರ್ಧರಿಸಿರುವ ಅಕಾಡೆಮಿ, ಮೆಟ್ರೊ ನಿಲ್ದಾಣದಲ್ಲಿ ಕಲಾ ಪ್ರದರ್ಶನಗಳನ್ನು ನಡೆಸಲು ಮುಂದಾಗಿದೆ.

ಈ ಯೋಜನೆಯ ಭಾಗವಾಗಿ ಮೊದಲ ಹಂತದಲ್ಲಿ ಎಂ.ಜಿ. ರಸ್ತೆಯಲ್ಲಿರುವ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ ಹಾಗೂ ಇಂದಿರಾನಗರದ ಮೆಟ್ರೊ ನಿಲ್ದಾಣವನ್ನು ಗುರುತಿಸಿದೆ. ಬಿಎಂಆರ್‌ಸಿಎಲ್‌ ಅನುಮತಿ ದೊರೆತ ಬಳಿಕ ಈ ಕೇಂದ್ರಗಳಲ್ಲಿ ಕಲಾಕೃತಿಗಳ ‍ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಅಕಾಡೆಮಿಗೆ ಆದಾಯ

ಈ ಪ್ರದರ್ಶನದಿಂದ ಅಕಾಡೆಮಿಗೂ ಆದಾಯ ಬರಲಿದ್ದು, ಆ ಹಣವನ್ನು ವಿವಿಧ ಕಲಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಕಳೆದ ವರ್ಷ ‘ಮನೆಗೊಂದು ಕಲಾಕೃತಿ’ ಯೋಜನೆಯಡಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಲಾ ಪ್ರದರ್ಶನಲ್ಲಿ 65 ಕಲಾಕೃತಿಗಳು ಮಾರಾಟವಾಗಿದ್ದವು. ಆಗ 700 ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು.

ಕಲಾಕೃತಿಗಳ ಮಾರಾಟದಿಂದ ಅಕಾಡೆಮಿಗೆ ₹6 ಲಕ್ಷಕ್ಕೂ ಅಧಿಕ ಆದಾಯ ಬಂದಿತ್ತು. ಆ ಹಣದ ನೆರವಿನಿಂದ ‍’ಪ್ರತಿಭಾನ್ವೇಷಣೆ’ ಯೋಜನೆ ರೂಪಿಸಿ, ಆಯ್ದ ಕಲಾ ವಿದ್ಯಾರ್ಥಿಗಳಿಗೆ ಕಲಾ ವೃತ್ತಿಯನ್ನು ಮುಂದುವರಿಸಲು ಆರ್ಥಿಕ ನೆರವು ಒದಗಿಸಲಾಗುತ್ತಿದೆ.

ಅಕಾಡೆಮಿ ನಡೆಸಿದ ತರಬೇತಿ, ಕಾರ್ಯಾಗಾರ, ಶಿಬಿರಗಳಲ್ಲಿ ನೂರಾರು ಕಲಾವಿದರಿಂದ ಸಾವಿರಾರು ಕಲಾಕೃತಿಗಳು ರಚಿಸಲ್ಪಟ್ಟಿವೆ. ಆ ಕಲಾಕೃತಿಗಳನ್ನು ಅಕಾಡೆಮಿ ಕೇಂದ್ರದಲ್ಲಿ ದಾಸ್ತಾನು ಮಾಡುತ್ತಾ ಬರಲಾಗಿದೆ. ಕೆಲ ಅಪರೂಪದ ಕಲಾಕೃತಿಗಳು ಸೇರಿವೆ. ಸುಸ್ಥಿತಿಯಲ್ಲಿರುವ ಕಲಾಕೃತಿಗಳನ್ನು ನಿಗದಿತ ಮೆಟ್ರೊ ನಿಲ್ದಾಣದಲ್ಲಿ ತಿಂಗಳಿಗೆ ಒಂದು ಅಥವಾ ಎರಡು ದಿನ ಪ‍್ರದರ್ಶಿಸಿ, ಕೈಗೆಟಕುವ ದರಕ್ಕೆ ಜನರಿಗೆ ಮಾರಾಟ ಮಾಡಲು ಅಕಾಡೆಮಿ ಚಿಂತನೆ ನಡೆಸಿದೆ.

‘ಮನೆಗೊಂದು ಕಲಾಕೃತಿ’ ಯೋಜನೆಯಡಿ ಕಲಾಕೃತಿಗಳಿಗೆ ತಜ್ಞರ ಸಮಿತಿ ದರ ನಿಗದಿ ಮಾಡಿತ್ತು. ಡ್ರಾಯಿಂಗ್‌ಗಳಿಗೆ ₹1 ಸಾವಿರದಿಂದ ₹2 ಸಾವಿರ ನಿಗದಿಪಡಿಸಿದರೆ, ಪೇಂಟಿಂಗ್‌ಗಳಿಗೆ ₹3 ಸಾವಿರದಿಂದ ₹30 ಸಾವಿರದವರೆಗೆ ದರ ನಿಗದಿಪಡಿಸಲಾಗಿತ್ತು. ಅಕಾಡೆಮಿಯ ದಾಸ್ತಾನು ಕೇಂದ್ರದಲ್ಲಿ 3×3 ಅಡಿವರೆಗಿನ ಅಳತೆಯ ಕಲಾಕೃತಿಗಳೂ ಮಾರಾಟಕ್ಕೆ ಲಭ್ಯವಿದೆ. ಜಲವರ್ಣ, ಆಯಕ್ರಿಲಿಕ್‌, ಮಧುಬನಿ, ತೈಲವರ್ಣ ಸೇರಿ ವಿವಿಧ ಪ್ರಕಾರದ ಕಲಾ ಕೃತಿಗಳು ಕಾರ್ಯಾಗಾರದಲ್ಲಿ ರಚಿಸಲ್ಪಟ್ಟಿವೆ.

ಮೆಟ್ರೊ ನಿಲ್ದಾಣಗಳಲ್ಲಿ ನಡೆಯುವ ಪ್ರದರ್ಶನದಲ್ಲಿ ಈ ಹಿಂದೆ ಪ್ರದರ್ಶನ ಕಂಡ, ಮಾರಾಟವಾಗದಿರುವ ಕಲಾಕೃತಿಗಳಿಗೆ ಇನ್ನಷ್ಟು ಕಡಿಮೆ ದರ ನಿಗದಿಪಡಿಸಲು ಅಕಾಡೆಮಿ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

ಕಲಾವಿದರ ಕಾಫಿ ಕೂಟ

ಅಕಾಡೆಮಿಯು ಕಲೆಯ ಬೆಳವಣಿಗೆ ದೃಷ್ಟಿಯಿಂದ ‘ಕಲಾವಿದರ ಕಾಫಿ ಕೂಟ’ ಎಂಬ ಯೋಜನೆಯನ್ನು ರೂಪಿಸಿದೆ. ಲಲಿತ ಕಲೆಯ ಬಗ್ಗೆ ಕಲಾವಿದರು ಹಾಗೂ ಸಂಬಂಧಪಟ್ಟವರು ಒಂದೆಡೆ ಸೇರಿ ಕಾಫಿ ಕುಡಿಯುತ್ತಾ ಮುಕ್ತವಾಗಿ ಚರ್ಚಿಸುವ ವಿಚಾರ ವಿನಿಮಯ ಮಾಡಿಕೊಳ್ಳುವ ಸಭೆ ಇದಾಗಿದೆ. ಹೊಸ ಕಲಾವಿದರು ಮತ್ತು ಅನುಭವಿ ಕಲಾವಿದರು ಪರಸ್ಪರ ಪರಿಚಿತರಾಗಲು ಜ್ಞಾನ ಹಂಚಿಕೊಳ್ಳಲು ಈ ಕೂಟ ಉತ್ತಮ ಅವಕಾಶವನ್ನು ಒದಗಿಸಲಿದೆ. ಬೆಂಗಳೂರು ಸೇರಿ ನಾಲ್ಕೂ ವಲಯಗಳಲ್ಲಿ ತಲಾ 25 ಸಭೆ ನಡೆಸಲು ಅಕಾಡೆಮಿ ನಿರ್ಧರಿಸಿದೆ. ಈ ರೀತಿ ಸಭೆ ನಡೆಸುವವರು ಅಕಾಡೆಮಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಒದಗಿಸುವ ಚಹಾ-ಕಾಫಿ ಹಾಗೂ ಬಿಸ್ಕತ್ತಿನ ವೆಚ್ಚವನ್ನು ಅಕಾಡೆಮಿ ಭರಿಸಲಿದೆ.

-ಪ.ಸ.ಕುಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮೆಟ್ರೊ ನಿಲ್ದಾಣದಲ್ಲಿ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಬಿಎಂಆರ್‌ಸಿಎಲ್‌ನಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು ಕೈಗೆಟಕುವು ದರದಲ್ಲಿ ಕಲಾಕೃತಿಗಳನ್ನು ಒದಗಿಸಲಾಗುವುದು

Leave a Reply

Your email address will not be published. Required fields are marked *