ಅಡಿಕೆಯಲ್ಲಿ ಹರಳು ಉದುರಿ ಇಳುವರಿ ಕುಂಠಿತವಾಗುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ…

Follow us

ಅಡಿಕೆಯಲ್ಲಿ ಹರಳು ಉದುರಲು ಕಾರಣವೇನು??

ಮಲೆನಾಡು, ಅರೆಮಲೆನಾಡು, ಕರಾವಳಿ ಪ್ರದೇಶ ಮತ್ತು ಬಯಲು ಸೀಮೆಯಲ್ಲಿ ಅಡಿಕೆ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೂ ಸಹ ಹಲವು ಹತ್ತು ಕಾರಣಗಳಿಂದ ಅಡಿಕೆ ಮರಗಳಿಂದ ಹೂ ಹಾಗೂ ವಿವಿಧ ಗಾತ್ರದ ಕಾಯಿಗಳು ಬಲಿಯುವುದಕ್ಕೆ ಮೊದಲೇ ಅಪಾರ ಸಂಖ್ಯೆಯಲ್ಲಿ ಉದುರುತ್ತವೆ. ನೀರು ಮತ್ತು ಪೋಷಕಾಂಶಗಳ ಕೊರತೆ, ಅಸಮರ್ಪಕ ನೀರಿನ ನಿರ್ವಹಣೆ, ಹವಮಾನ ವೈಪರೀತ್ಯ, ಕೀಟ ಮತ್ತು ರೋಗಗಳ ಬಾಧೆ ಹೂ ಮತ್ತು ಕಾಯಿ ಉದುರುವಿಕೆಗೆ ಮುಖ್ಯ ಕಾರಣಗಳಾಗಿರುತ್ತವೆ.

ಕಾಯಿಗಳ ಉದುರುವಿಕೆಗೆ ಕಾರಣಗಳು ಮತ್ತು ಲಕ್ಷಣಗಳು

ಹಿಂಗಾರ ಒಣಗುವುದು ಮತ್ತು ಎಳೆಕಾಯಿ ಉದುರುವಿಕೆ :

  • ಬೇಸಿಗೆಯಲ್ಲಿ ನೀರಿನ ಕೊರತೆಯಾಗಿ ಬಿಸಿಗಾಳಿಯ ಉಷ್ಣತೆಗೆ ತುತ್ತಾದ ಹಿಂಗಾರಗಳು ಒಣಗುವುದಕ್ಕೆ ಪ್ರಾರಂಭವಾಗುತ್ತದೆ. ನಂತರದ ದಿನಗಳಲ್ಲಿ ಬಿಸಿಗಾಳಿಯು ವಾತಾವರಣ ಹಾಗೂ ಅಧಿಕ ಆದ್ರತೆ ಉಂಟಾದಾಗ ಹಿಂಗಾರದ ಹೆಣ್ಣು ಹೂಗಳ ಶಿಲೀಂಧ್ರದ ಸೋಂಕಿಗೆ ತುತ್ತಾಗುತ್ತವೆ. ಮೊಗ್ಗುಗಳು ಪರಾಗ ಸ್ಪರ್ಶವಾಗದೆ ಹಸಿರಾಗುವ ಮೊದಲೆ ಹೂಗಳು ಉದುರುತ್ತವೆ. ಈ ರೀತಿಯ ಹವಮಾನ ವೈಪರೀತ್ಯ ಮುಂದುವರೆದಾಗ ಶಿಲೀಂಧ್ರಗಳು ಹೆಚ್ಚಾಗಿ ಹಿಂಗಾರ ಒಣಗುವ ರೋಗ ಕಂಡು ಬಂದು ಹೂ ಮತ್ತು ಎಳೆಕಾಯಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದುರುತ್ತವೆ.

ಪೆಂಟಟೋಮಿಡ್ ತಿಗಣೆ :

  • ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಏರುಪೇರಾದ ಹವಾಮಾನ ವೈಪರೀತ್ಯ ಎಳೆ ಕಾಯಿಗಳ ರಸ ಹೀರುವ ಕೀಟ ಪೆಂಟಾಟೋಮಿಡ್ ತಿಗಣೆಯ ವಂಶಾಭಿವೃದ್ಧಿಗೆ ಸೂಕ್ತವಾಗಿರುತ್ತದೆ. ಅಧಿಕ ಸಂಖ್ಯೆಯಲ್ಲಿ ವೃದ್ಧಿಯಾದ ಈ ಕೀಟಗಳು ಏಪ್ರಿಲ್‌ನಿಂದ ಆಗಸ್ಟ್ ತಿಂಗಳವರೆಗೆ ಮಲೆನಾಡಿನ / ಬಯಲು ಸೀಮೆಯ ಅಡಿಕೆ ತೋಟದಲ್ಲಿ ಮಿಳ್ಳೆ ಕಾಯಿಗಳ ತೊಟ್ಟಿನ ಪಕ್ಕದಲ್ಲಿ ಕೂತು ರಸ ಹೀರುತ್ತವೆ. ರಸ ಹೀರಿದ ಭಾಗದಲ್ಲಿ ಸಣ್ಣದಾದ ಕಪ್ಪನೆಯ ಚುಕ್ಕೆ ಕಂಡುಬಂದು ಕಾಯಿಗಳ ತೊಟ್ಟು ಬಲಹೀನವಾಗಿ ಗೊನೆಯಲ್ಲಿರುವ ಅಪಾರ ಸಂಖ್ಯೆಯ ಎಳೆ ಕಾಯಿಗಳು ಉದುರಿ ಗೊನೆಯೇ ಬರಿದಾಗುತ್ತದೆ. ಇದರಿಂದ ಶೇಕಡಾ 15 ರಿಂದ 30 ರಷ್ಟು ಬೆಳೆ ನಷ್ಟ ಉಂಟಾಗುತ್ತದೆ.

ಪೋಷಕಾಂಶಗಳ ಕೊರತೆ :

  • ಪ್ರಾಯದ ಮರಗಳಿಗೆ ಪೊಟ್ಯಾಷ್ ಬೋರಾನ್ ಕೊರತೆಯುಂಟಾದಾಗ ಶಾರೀರಿಕ ಅಸಮತೋಲನ ಕಂಡುಬಂದು ಹೂ ಮತ್ತು ಕಾಯಿಗಳ ತೊಟ್ಟು ಶಕ್ತಿ ಕಳೆದುಕೊಳ್ಳುತ್ತದೆ. ನಂತರ ಮುಂಗಾರಿನ ಮಳೆ ಪ್ರಾರಂಭವಾದಾಗ ತೊಟ್ಟಿನ ಭಾಗ ನೀರಿನಿಂದ ತೊಯ್ದು ಹೂ ಮತ್ತು ಕಾಯಿಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದು ಕೊಂಡು ಕಾಯಿಗಳು ಬೀಳುತ್ತವೆ.

ಕಾಯಿ ಸೀಳುವಿಕೆ ಅಥವಾ ಅಂಡೊಡಕ :

  • ಅರ್ಧ ಬಲಿತ ಕಾಯಿಗಳು ಮಾಗುವುದಕ್ಕೆ ಮೊದಲೇ ನಸು ಹಳದಿ ಬಣ್ಣಕ್ಕೆ ತಿರುಗಿ ಹಿಂಭಾಗದಿಂದ ಅಥವಾ ಎರಡೂ ತುದಿಯಿಂದ ಬಿರುಕು / ಸೀಳುತ್ತವೆ. ಗದ್ದೆ ಜಮೀನನ್ನು ಅಡಿಕೆ ತೋಟವಾಗಿ ಮಾರ್ಪಾಡು ಮಾಡಿದಾಗ ಮತ್ತು ಅಡಿಕೆಯನ್ನು ಶೀತದ ಮಣ್ಣಿನಲ್ಲಿ ಅಂದರೆ ನಾಲೆಯ ಪಕ್ಕ ಕೆರೆದಂಡೆ ಮತ್ತು ನೀರು ನಿಲ್ಲುವ ಚೌಗು ಪ್ರದೇಶದಲ್ಲಿ ಬೆಳೆದಾಗ ವಯಸ್ಕ ಮರಗಳಲ್ಲಿ ಈ ಬಾಧೆ ಕಂಡು ಬರುತ್ತದೆ. ಕೆಲವೊಮ್ಮೆ ಹೆಚ್ಚು ಉಷ್ಣಾಂಶವಿದ್ದು ಒಂದೇ ಸಮನೆ ಸುರಿಯುವ ಮಳೆಯ ವಾತಾವರಣದಲ್ಲಿ ತೇವಾಂಶ ಗಣನೀಯವಾಗಿ ಹೆಚ್ಚಾದರೆ ಹಾಗೂ ಮಣ್ಣಿನಲ್ಲಿ ಬೋರಾನ್ ಕೊರತೆಯುಂಟಾದಾಗಲೂ ಈ ಬಾಧೆ ಕಂಡು ಬರುತ್ತದೆ. ಸೀಳಿದ ಕಾಯಿಗಳು ಕೆಲವೇ ದಿನಗಳಲ್ಲಿ ಗೊನೆಯಿಂದ ಕೆಳಗೆ ಉದುರುತ್ತವೆ.

ಕಾಯಿ ಕೊಳೆ ಮತ್ತು ಉದುರುವಿಕೆ :

  • ನಿರಂತರವಾಗಿ ಎಡಬಿಡದೆ ಮಳೆ ಬೀಳುವ ಮಲೆನಾಡಿನ ಪ್ರದೇಶಗಳಲ್ಲಿ ಕಾಯಿಗಳ ತೊಟ್ಟಿನ ಭಾಗ ಶಿಲೀಂಧ್ರದ ಸೋಂಕಿಗೆ ತುತ್ತಾಗುವುದರಿಂದ ತೊಟ್ಟು ಬಲಹೀನವಾಗಿ ಬಹುತೇಕ ಕಾಯಿಗಳು ಬಲಿಯುವ ಮೊದಲೇ ಉದುರುತ್ತವೆ. ಬಿದ್ದ ಕಾಯಿಗಳಿಂದ ವಿಶಿಷ್ಟವಾದ ಕೊಳೆತ ವಾಸನೆ ಬರುತ್ತದೆ.

ಸಮಗ್ರ ನಿರ್ವಹಣೆ :

  • ಒಣಗಿದ ಹಿಂಗಾರಗಳನ್ನು ತೆಗೆದು ಉದುರಿರುವ ಕಾಯಿಗಳನ್ನು ಆರಿಸಿ ನಾಶ ಪಡಿಸುವುದು.
  • 3 ಗ್ರಾಂ ಡೈಥೇನ್-ಎಂ-45 ಶಿಲೀಂಧ್ರ ನಾಶಕವನ್ನು 2 ಮಿ.ಲೀ ಕ್ಲೋರೋಫೈರಿಫಾಸ್ 20 ಇಸಿ ಕೀಟನಾಶಕದ ಜೊತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಹೂ ಗೊಂಚಲಿನ ಮೇಲೆ ಸಿಂಪಡಿಸಿದರೆ ಹಿಂಗಾರ ಒಣಗು ಮತ್ತು ಹಿಂಗಾರ ತಿನ್ನುವ ಹುಳುವನ್ನು ಹತೋಟಿ ಮಾಡಬಹುದು.
  • ಪ್ರಾಯದ ಮರಗಳಿರುವ ಅಡಿಕೆ ತೋಟದಲ್ಲಿ ಮಣ್ಣು ಪರೀಕ್ಷೆ ಮಾಡಿಸಿ ಶಿಫಾರಸ್ಸು ಮಾಡಿದ ಗೊಬ್ಬರದ (100:40:140 ಎನ್ ಪಿಕೆ ) ಅಸಮತೋಲನೆ ಇದ್ದರೆ ಸರಿ ಪಡಿಸಿ ಮಣ್ಣು ಪರೀಕ್ಷೆ ವರದಿಯನ್ನಾಧರಿಸಿ ಪೋಷಕಾಂಶಗಳನ್ನು ಪೂರೈಸಬೇಕು.
  • ಪ್ರತಿ ಮರಕ್ಕೆ 10-12 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರವನ್ನು ಕೊಡಬೇಕು.
  • ಸಮರ್ಪಕ ನೀರಿನ ನಿರ್ವಹಣೆ ಮಾಡಬೇಕು.
  • ಕಾಯಿ ಸೀಳುವ ಮರಗಳನ್ನು ಗುರುತಿಸಿ ಬೋರಾಕ್ಸ್‌ ಸೂಕ್ಷ್ಮ ಪೋಷಕಾಂಶಗಳನ್ನು ಮಳೆಗಾಲದ ಆರಂಭದಲ್ಲಿ ಪ್ರತಿ ಗಿಡಕ್ಕೆ 20 ಗ್ರಾಂ ನಂತೆ ಮಣ್ಣಿನಲ್ಲಿ ಬೆರೆಸಬೇಕು.
  • ಕಾಯಿ ಕೊಳೆ ರೋಗಕ್ಕೆ ಮುಂಗಾರುಪ್ರಾರಂಭವಾಗುವ ಮೊದಲೇ ಶೇಕಡ ಒಂದರಬೋರ್ಡೋ ದ್ರಾವಣವನ್ನು ಹಿಂಗಾರ/ ಗೊಂಚಲಿನಮೇಲೆ ಸಿಂಪಡಿಸಿ ನಂತರ ತಿಂಗಳಿಗೊಮ್ಮೆ ಎರಡು-ಮೂರು ಬಾರಿ ಸಿಂಪರಣೆ ಮಾಡಬೇಕು.
  • ಕೊಳೆ ರೋಗದಿಂದ ಉದುರಿದ ಕಾಯಿಗಳನ್ನುಆಯ್ದು ನಾಶ ಪಡಿಸಬೇಕು.
  • ಅಡಿಕೆ ತೋಟದಲ್ಲಿ ತೇವಾಂಶ ಒಂದೇ ತರನಾಗಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯ.

Leave a Reply

Your email address will not be published. Required fields are marked *