Davanagere: ಪ್ರಥಮ ಖಾಸಗಿ ಕೃಷಿ, ತೋಟಗಾರಿಕೆ ಕಾಲೇಜು ಆರಂಭ

ದಾವಣಗೆರೆ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೃಷಿ ಮತ್ತು ತೋಟಗಾರಿಕಾ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ನಗರದ ಬಾಪೂಜಿ ವಿದ್ಯಾಸಂಸ್ಥೆಯಿಂದ ಖಾಸಗಿ ಪ್ರಥಮ ಕೃಷಿ ಮತ್ತು ತೋಟಗಾರಿಕಾ ಕಾಲೇಜು ಆರಂಭ ಮಾಡಲಿದೆ.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ .1ರ ಶನಿವಾರ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಬಾಪೂಜಿ ವಿದ್ಯಾರ್ಥಿ ಸಂಸ್ಥೆಗೆ ಕೃಷಿ ಮತ್ತು ತೋಟಗಾರಿಕಾ ಕಾಲೇಜು ಆರಂಭಿಸಲು ಸರ್ಕಾರ ಅಕ್ಟೋಬರ್‌ 31ರಂದು ಅನುಮತಿ ನೀಡಿದ್ದು, ಈ ಕಾಲೇಜು ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಸಂಯೋಜನೆಯಡಿಯಲ್ಲಿ ಎಸ್‌.ಎಸ್‌. ಇನ್‌ಸ್ಟಿಟ್ಯೂಟ್‌ ಆಫ್‌ ಅಗ್ರಿಕಲ್ಚರ್‌ ಆಯಂಡ್‌ ಹಾರ್ಟಿಕಲ್ಚರ್‌ ಸೈನ್ಸಸ್‌ ಮಹಾವಿದ್ಯಾಲಯ ಕಾರ್ಯಾರಂಭ ಮಾಡಲಿದೆ. ಬಾಪೂಜಿ ವಿದ್ಯಾ ಸಂಸ್ಥೆಯ ಎಸ್‌.ಎಸ್‌. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆಯಂಡ್‌ ರಿಸರ್ಚ್ ಸೆಂಟರ್ ಆವರಣದಲ್ಲಿ ಕಾಲೇಜು ಆರಂಭವಾಗಲಿದೆ ಎಂದು ತಿಳಿಸಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಸಚಿವರು ಮಾತನಾಡಿ, ಇಲ್ಲಿವರೆಗೆ ಸರ್ಕಾರದಿಂದ ಖಾಸಗಿ ಸಂಸ್ಥೆಗಳಿಗೆ ಕೃಷಿ ಕಾಲೇಜು ಮಾಡಲು ಅವಕಾಶವಿರಲಿಲ್ಲ. ಇದೇ ಪ್ರಥಮ ಬಾರಿಗೆ ಈ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಈ ಕಾಲೇಜಿನಿಂದ ಜಿಲ್ಲೆಯ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಶೇ.60ರಷ್ಟು ಸೀಟು ಸಿಇಟಿ ಮೂಲಕ ಆಯ್ಕೆ ಮತ್ತು 40ರಷ್ಟು ಆಡಳಿತ ಮಂಡಳಿ ಕೋಟಾದಲ್ಲಿ ನೀಡಲಾಗುತ್ತದೆ. 2025-26ನೇ ಸಾಲಿನಿಂದಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ರೈತರ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಎಷ್ಟೋ ಜನ ರೈತರ ಮಕ್ಕಳಿಗೆ ಅನುಕೂಲವಾಗುವಂತೆ ಈ ಹೊಸ ಕೃಷಿ ಮತ್ತು ತೋಟಗಾರಿಕೆ ಕಾಲೇಜನ್ನು ತೆರೆಯಲು ಅವಕಾಶ ನೀಡಿದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇದರ ಅಡಿಯಲ್ಲಿ ಈ ಕಾಲೇಜನ್ನು ತೆರೆಯಲು ಅವಕಾಶ ಮಾಡಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ರೈತರ ಮಕ್ಕಳು ಮಾಡಿಕೊಂಡು ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರ ಹಾಗು ಹೊಸ ಹೊಸ ತಂತ್ರಜ್ಞಾನ ಹಾಗೂ ಸಾವಯವ ಕೃಷಿ ಕಡೆಗೆ ರೈತರನ್ನು ತರುವ ನಿಟ್ಟಿನಲ್ಲಿ ಈ ಒಂದು ಸಂಸ್ಥೆಯನ್ನು ಬೆಳೆಸಿ ಹಾಗೂ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯಲ್ಲಿ ಯುವಕರು ಪಾಲ್ಗೊಂಡು ನಮ್ಮ ದೇಶದ ಆರ್ಥಿಕತೆಯನ್ನು ಇನ್ನು ಹೆಚ್ಚಿನ ರೀತಿಯಲ್ಲಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ ಅವರು ಮಾತನಾಡಿ ತಿಳಿಸಿದರು.

Leave a Reply

Your email address will not be published. Required fields are marked *