ಅಡಿಕೆಯಲ್ಲಿ ಕಾಯಿ ಕೊಳೆ ರೋಗ ಹೆಚ್ಚಾಗಿದೆಯೇ??ಇಲ್ಲಿದೆ ಸಂಪೂರ್ಣ ಮಾಹಿತಿ..

Follow us

ಅಡಿಕೆ ಕೊಳೆ ರೋಗ ನಿರ್ವಹಣೆಗೆ

ಮುನ್ಸೂಚನಾ ಕ್ರಮಗಳು

ಈ ರೋಗವು ಫೈಟೋಪ್ಥೋರ ಮೇಡಿ ಎಂಬ ಶಿಲೀಂದ್ರದಿಂದ ಉಂಟಾಗುವುದು. ಈ ರೋಗಾಣುವಿನ ಬೀಜಗಳು ಸಾಮಾನ್ಯವಾಗಿ ಗಿಡದ ಹಿಂಗಾರಗಳಲ್ಲಿ ಅಥವಾ ಕಳೆದ ವರ್ಷ ಅಥವಾ ಹಿಂದಿನ ವರ್ಷ ಮರದ ಬುಡಭಾಗದಲ್ಲಿ ಬಿದ್ದಿರುವ ರೋಗಪೀಡಿತ ಕಾಯಿಗಳಲ್ಲಿ ಸುಪ್ತಾವಸ್ಥೆಯಲ್ಲಿದ್ದು ಮೊದಲ ಮಳೆ ಬಂದ 15-20 ದಿನಗಳ ನಂತರ ಮೊಳಕೆಯೊಡೆದು ಗಾಳಿಮುಖಾಂತರ ಹಿಂಗಾರಗಳಿಗೆ ಹರಡಿ ರೋಗವನ್ನುಂಟುಮಾಡುತ್ತದೆ. ಸಾಮಾನ್ಯವಾಗಿ ಈ ರೋಗದಿಂದ ಜುಲೈ ತಿಂಗಳಲ್ಲಿ ಎಳೆಕಾಯಿ ಉದುರುವಿಕೆ, ಆಗಸ್ಟ್‌ ತಿಂಗಳಲ್ಲಿ ಅರೆಬಲಿತ ಕಾಯಿಗಳಲ್ಲಿ ನೀರ್ಗೋಳೆ, ಮತ್ತು ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳುಗಳಲ್ಲಿ ಬಲಿತ ಕಾಯಿಗಳಲ್ಲಿ ಬೂದುಗೊಳೆ ಕಂಡುಬರುವುದು, ಈ ರೋಗ ಹತೋಟಿ ಮಾಡದಿದ್ದಲ್ಲಿ ಮಳೆಗಾಲ ಮುಗಿದ ನಂತರ ನವೆಂಬರ್‌ ಡಿಸೆಂಬರ್‌ ತಿಂಗಳುಗಳಲ್ಲಿ ಸುಳಿ ಕೊಳೆ ಮತ್ತು ತಿರಿ ಕೊಳೆ ರೋಗಗಳು ಕಾಣಿಸಿಕೊಂಡು ಕೊಳೆ ಪೀಡಿತ ಮರಗಳು ಸಾಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೊಳೆ ರೋಗದ ರೋಗಕಾರಕವು ಪ್ರಕೃತಿಯಲ್ಲಿ ಹೇಗೆ ಯಾವಾಗಲೂ ಉಳಿದುಕೊಳ್ಳುತ್ತದೆ.

ಹಿಂದಿನ ವರ್ಷ ಖಟಾವು ಮಾಡದೆ ಉಳಿದ ಸತ್ತ ಹಿಂಗಾರಗಳಲ್ಲಿ, ಬುಡದಲ್ಲಿರುವ ರೋಗ ಪೀಡಿತ ಕಾಯಿಗಳಲ್ಲಿ ಮತ್ತು ಸುಳಿ ಕೊಳೆ ಪೀಡಿತ ಭಾಗಗಳಲ್ಲಿ ಈ ರೋಗಾಣುಗಳು ಶಿಲೀಂಧ್ರ ತಂತು ಅಥವಾ ಕ್ಲೈಮೈಡೋಸ್ಬೋರ್‌ ಅಥವಾ ಊವೋಸ್ಟೋರ್‌ ರೂಪದಲ್ಲಿ ಸುಪ್ತಾವಸ್ಥೆಯಲ್ಲಿರುತ್ತವೆ.

ರೋಗ ಹರಡುವಿಕೆಗೆ ಸಹಾಯ ಮಾಡುವ ಮುಖ್ಯ ಅಂಶಗಳು

  • ಕಾಯಿಗಳ ಮೇಲೆ ಸತತವಾಗಿ ತೇವಾಂಶವಿದ್ದು ಬಿಟ್ಟು ಬಿಟ್ಟು ಬರುವ ಮಳೆ, ಬಿಸಿಲು, ಶೀತ ಗಾಳಿ ಹಾಗೂ ಮೊಡಕವಿದ ವಾತಾವರಣವು ರೋಗಾಣುಗಳ ಬೆಳವಣಿಗೆಗೆ ಮತ್ತುಅಭಿವೃದ್ಧಿಗೆ ಪೂರಕವಾಗುತ್ತದೆ
  • ವಾತಾವರಣದ ಉಷ್ಣಾಂಶ 15-20″ ಸೆ. ಕ್ಕಿಂತ ಕಡಿಮೆ ಇದ್ದು ತೇವಾಂಶ ಶೇ 90 ಕಿಂತ ಹೆಚ್ಚಾಗಿದ್ದಲ್ಲಿ ರೋಗಾಣುಗಳ ಬೆಳವಣಿಗೆ ಮತ್ತು ಎಳೆಗಾಯಿಗಳ ಮೇಲೆ ಸೋಂಕು ಹರಡಲು ಹೆಚ್ಚು ಅನುಕೂಲವಾಗುತ್ತದೆ.

ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣದ ಸೂಕ್ತತೆ

  • ಬೋರ್ಡೋ ದ್ರಾವಣದಲ್ಲಿ ಸುಣ್ಣದ ಅಂಶವಿದ್ದು, ಇದರಅಂಟು ಗುಣದಿಂದಾಗಿ ಕಾಯಿಗಳ ಮೇಲೆ ಇದರ ಉಳಿವಿಕೆಯ ಪ್ರಮಾಣ ಬೇರೆ ಶಿಲೀಂದ್ರ ನಾಶಕಗಳಿಗಿಂತ ಹೆಚ್ಚು ಇರುತ್ತದೆ.
  • ಈ ದ್ರಾವಣವು ರೋಗಾಣುವಿನ ಬೀಜಗಳು ಉತ್ಪತ್ತಿಯಾಗುವುದನ್ನು ತಡೆಯುವುದರ ಜೊತೆಗೆ ಈ ರೋಗಾಣುಗಳನ್ನು ವೇಗವಾಗಿ ನಾಶಪಡಿಸುವ ಗುಣ ಮೈಲುತುತ್ತದಲ್ಲಿರುವ ತಾಮ್ರದ ಅಂಶಕ್ಕೆ ಮಾತ್ರ ಹೆಚ್ಚು ಇರುತ್ತದೆ.
  • ಬೋರ್ಡೋ ದ್ರಾವಣಕ್ಕೆ ಪರ್ಯಾಯ ಶಿಲೀಂದ್ರ ನಾಶಕಗಳು ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿದ್ದರೂ ಯಾವುದೇ ಶಿಲೀಂದ್ರನಾಶಕ ಬೋರ್ಡೋ ದ್ರಾವಣಕ್ಕೆ ಸರಿ ಸಾಟಿಯಾಗಿರುವುದಿಲ್ಲ.
  • ಕೊಳೆ ರೋಗಾಣುಗಳ ಸಂಖ್ಯೆ ಹೆಚ್ಚಾದಾಗ, ಅವುಗಳ ಬೆಳವಣಿಗೆಗೆ ಸೂಕ್ತ ವಾತಾವರಣವಿದ್ದಾಗ, ಯಾವುದೇ ನಾಶಕಗಳನ್ನು ಬಳಸಿದರೂ ಸಂಪೂರ್ಣ ರೋಗ ನಿಯಂತ್ರಣ ಅಸಾದ್ಯ, ಆದ್ದರಿಂದ ರೋಗ ಹರಡು ಮುನ್ನವೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸೂಕ್ತ.

ಮುನ್ನೆಚ್ಚರಿಕಾ ಕ್ರಮಗಳು

  • ಸತ್ತ ಹಿಂಗಾರಗಳನ್ನು ತೆಗೆದು ನಾಶಪಢಿಸುವುದು
  • ಕಳೆದ ವರ್ಷ ಮರದ ಬುಡಭಾಗದಲ್ಲಿ ಬಿದ್ದಿರುವ ರೋಗ ಪೀಡಿತ ಉದುರಿದ ಕಾಯಿಗಳನ್ನು ಆರಿಸಿ ಸುಡುವುದು.
  • ತೋಟದಲ್ಲಿ ಸರಾಗವಾಗಿ ಗಾಳಿಯಾಡಲು ಅಂತರ ಬೆಳೆಗಳ(ಲವಂಗ, ಕಾಳು ಮೆಣಸು, ದಾಲ್ಜಿನ್ನಿ, ಕೋಕೋ, ಇತ್ಯಾದಿ)ಅಗತ್ಯಕ್ಕಿಂತ ಹೆಚ್ಚಿನ ರೆಂಬೆಗಳನ್ನು ತೆಗೆಯುವುದು.
  • ತೋಟದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆಗಳನ್ನು ತೆಗೆಯುವುದು.
  • ಮಣ್ಣಿನ ರಸಸಾರ ಆಮ್ಲೀಯವಾಗಿದ್ದಲ್ಲಿ (6.5 ಕಡಿಮೆ ಇದ್ದಲ್ಲಿ ಕೃಷಿಸುಣ್ಣವನ್ನು ರಸಗೊಬ್ಬರ ಕೊಡುವುದಕ್ಕೆ ಮುಂಚೆ ಪ್ರತಿ ಎಕರೆಗೆ 200 ಕೆ.ಜಿ.ಯಂತೆ ಮಣ್ಣಿನಲ್ಲಿ ಮಿಶ್ರ ಮಾಡುವುದು.
  • ಸಾವಯವ ಗೊಬ್ಬರ ಮತ್ತು ರಸಗೊಬ್ಬರಗಳನ್ನು ಎರಡು ಹಂತದಲ್ಲಿ ಮೇ-ಜೂನ್‌ ಮತ್ತು ಸೆಪ್ಟೆಂಬರ್‌ ಅಕ್ಟೋಬರ್‌ ತಿಂಗಳುಗಳಲ್ಲಿ ಪ್ರತಿಮರಕ್ಕೆ 50;20;70 ಗ್ರಾಂ ನಂತೆ (ಸಾ.ರ.ಪೊ. ರೂಪದಲ್ಲಿ) ವರ್ಷಕ್ಕೆಎರಡು ಬಾರಿ ಒದಗಿಸುವುದು.
  • ಮಣ್ಣು ಪರೀಕ್ಷೆ ಆಧಾರದಲ್ಲಿ ಲಘು ಪೋಷಕಾಂಶಗಳಾದ ಸತು,ಬೊರಾನ್, ಮೆಗ್ನೀಷಿಯಂ ಮಂತಾದವುಗಳನ್ನು ಅವಶ್ಯವಿದ್ದಲ್ಲಿ ಬಳಸಬೇಕಾಗುವುದು.
  • ಮೇ 15 ರನಂತರ ತಟ್ಟಸ್ಥಗೊಳಿಸಿದ ಬೋರ್ಡೋ ದ್ರಾವಣವನ್ನು ಈ ಕೆಳಗೆ ನಮೂದಿಸಿದ ಸಮಯದಲ್ಲಿ ಸಿಂಪರಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ.

ಗಮನಿಸಬೇಕಾದ ಅಂಶಗಳು

  • ಬ್ರಾಂಡೆಡ್‌ ಮೈಲುತುತ್ತವನ್ನು ಬಳಸಬೇಕು, (ತಾಮ್ರದ ಅಂಶ ಕನಿಷ್ಠ |.ಶೇ 25 ರಷ್ಟು ಇರಬೇಕು)
  • ಕೃಷಿ ಸುಣ್ಣವನ್ನು ಬೋರ್ಡೋ ದ್ರಾವಣದ ತಯಾರಿಕೆಗೆ ಬಳಸುವುದು
  • ಸುಟ್ಟ ಸುಣ್ಣ ಅಥವಾ ಚಿಪ್ಪು ಸುಣ್ಣವನ್ನು ಮಾತ್ರ ಬಳಸುವುದು ಒಳ್ಳೆಯದು ವೈಜ್ಞಾನಿಕ ಆಧಾರದಲ್ಲಿ ಹೇಳುವುದಾದರೆ 100 ಲೀಟರ್‌ ಬೋರ್ಡೋ ದ್ರಾವಣ ತಯಾರಿಸಲು 1 ಕೆಜಿ ಮೈಲುತುತ್ರಕ್ಕೆ 1/2 ಕೆಜಿ ಸುಟ್ಟ ಅಥವಾ ಚಿಪ್ಪು ಸುಣ್ಣ ಸಾಕಾಗುತ್ತದೆ.
  • ಸುಣ್ಣವನ್ನು ಬಳಸುವುದು ಮೈಲುತುತ್ತದ ಆಮ್ಲೀಯ ಗುಣವನ್ನು (ಸುಡುವ) ಕಡಿಮೆ ಮಾಡಲು ಮಾತ್ರ ಹೆಚ್ಚಿಗೆ ಸುಣ್ಣವನ್ನು ಬೋರ್ಡ ದ್ರಾವಣಕ್ಕೆ ಹಾಕುವುದರಿಂದ ಯಾವುದೇ ಉಪಯೋಗವಾಗುವುದಿಲ್ಲ.
  • ಹೊಸದಾಗಿ ತಯಾರಿಸಿದ ಬೋರ್ಡೊ ದ್ರಾವಣವನ್ನು ಮಾತ್ರಸಿಂಪರಣೆಗೆ ಬಳಸುವುದು.
  • ಕಳೆದ ವರ್ಷ ಸುಳಿಕೊಳೆ, ತಿರಿಕೊಳೆ ಇದ್ದ ಮರಗಳು ಸತ್ತಿದ್ದಲ್ಲಿ ಅಂತಹ ಮರಗಳನ್ನು ಬುಡಸಮೇತ ತೆಗೆದು ಕೊಳೆತ ಭಾಗಗಳನ್ನು` ಸುಡುವುದು. ಸುತ್ತಲೂ ಇರುವ ಮರಗಳ/ಸುಳಿ ಬಾಗಗಳ ಗೊಂಚಲುಗಳಿಗೆ ಶೇ. 1 ರ ಬೋರ್ಡೊ ದ್ರಾವಣ ಸಿಂಪಡಿಸುವುದು.
  • ಬೋರ್ಡೊ ದ್ರಾವಣ ಸಿಂಪರಣೆ ಮಾಡಿದ ಮೇಲೆ 4 ರಿಂದ 5 ಗಂಟೆಗಳ ಕಾಲ ಮಳೆ ಬಾರದಿದ್ದರೆ ಔಷಧಿಯ ಪರಿಣಾಮ ಉತ್ತಮವಾಗಿರುತ್ತದೆ.
  • ಬೋರ್ಡೊ ದ್ರಾವಣದ ಜೊತೆ ಯಾವ ಕೀಟನಾಶಕಗಳನ್ನು ಮಿಶ್ರಮಾಡಿ ಬಳಸಲು ಶಿಫಾರಸ್ಸು ಇರುವುದಿಲ್ಲ.
  • ಬೋರ್ಡೋ ಜೊತೆ ಮಿಶ್ರ ಮಾಡುವ ರಾಳವು ಸಹತಟಸ್ಥವಾಗಿರಬೇಕು.
  • ಬೋರ್ಡೋ ದ್ರಾವಣ ತಟಸ್ಥವಾಗಿದೆಯೇ ಇಲ್ಲವೇ ಎಂಬುದನ್ನುಪರೀಕ್ಷಿಸಲು ರಸಸಾರ ಹಾಳೆಯನ್ನು (PH Paper) ಬಳಸಬಹುದು.
  • ಮರಗಳ ಎತ್ತರ ಕಡಿಮೆ ಇರುವ ಕಡೆ ಮಳೆಗಾಲಕ್ಕೆ ಮುಂಚೆ ಪ್ಲಾಸ್ಟಿಕ್‌ ಕೊಟ್ಟೆಯನ್ನು ಗೊನೆಗಳಿಗೆ ಕಟ್ಟುವುದರಿಂದಲೂ ಸಹ ಈ ರೋಗದ ಬಾಧೆಯನ್ನು ತಡೆಗಟ್ಟಬಹುದು.
  • ಕಾಯಿಕೊಳೆ ರೋಗದ ನಿರ್ವಹಣೆಗೆ ಜೈವಿಕ ಶಿಲೀಂದ್ರನಾಶಕಗಳಾದ ಟ್ರೈಕೋಡರ್ಮ ಹಾರ್ಜಿಯಾನಂ ಹಾಗೂ ಸೂಡೊಮೊನಾಸ್ ಪ್ಲೂರೆಸೆನ್‌ (50 ಗ್ರಾಂ ನಂತೆ) ಅನ್ನು ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿಯ ಜೊತೆ ಬೆರೆಸಿ ಗಿಡದ ಬುಡಕ್ಕೆ ಹಾಕುವುದು.

Leave a Reply

Your email address will not be published. Required fields are marked *